ಬಿಂದೂರಾಯ ಸಂ, ಗೋ
1876-1969. ಕರ್ನಾಟಕದ ಪ್ರಸಿದ್ಧ ಗಮಕಿ. ಕುಮಾರವ್ಯಾಸ ಭಾರತವನ್ನು ಸುಶ್ರಾವ್ಯವಾಗಿ ಹಾಡುತ್ತಿದ್ದುದರಿಂದ ಭಾರತದ ಬಿಂದೂರಾಯರೆಂದೂ ಪ್ರಸಿದ್ಧರಾಗಿದ್ದರು. ಇವರು ಶಿವಮೊಗ್ಗ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಸಂತೆಬೆನ್ನೂರಿನಲ್ಲಿ. 1876ರಲ್ಲಿ ಜನಿಸಿದರು; ಇವರ ತಂದೆ ಗೋವಿಂದರಾಯರು, ತಾಯಿ ರಮಾಬಾಯಿ. ಬಿಂದೂರಾಯರು ಹೊಸದುರ್ಗದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಗ ಇವರಿಗೆ ಜೋಡಿದಾರ್ ಶಾಮಾಚಾರ್ಯರ ಪರಿಚಯವಾಯಿತು. ಶಾಮಾಚಾರ್ಯರು ಬಿಂದೂ ರಾಯರಿಗಿಂತ ಬಹಳ ಹಿರಿಯರು ಕುಮಾರವ್ಯಾಸ ಭಾರತ. ಜೈಮಿನಿ ಭಾರತ, ರಾಜಶೇಖರ ವಿಲಾಸಗಳನ್ನು ವಾಚನ ಮಾಡುವುದರಲ್ಲಿ ನಿಷ್ಣಾತರಾಗಿದ್ದರು. ಅವರ ಭಾರತ ವಾಚನ ಕೇಳಿ ಅದನ್ನು ಮೂದಲಿಸಿದ್ದ ಬಿಂದೂ ರಾಯರು ಗಮಕವಾಚನವನ್ನು ಸವಾಲಾಗಿ ತೆಗೆದುಕೊಂಡು ಸ್ವಂತ ಪರಿಶ್ರಮದಿಂದ ಆ ಕಲೆಯನ್ನು ಕರಗತ ಮಾಡಿಕೊಂಡರು. ಮುಂದೊಂದು ದಿನ ಸ್ವತಃ ಶಾವಾಚಾರ್ಯರಿಂದಲೇ ಶಹಭಾಸಗಿರಿ ಪಡೆದು ತಮ್ಮ ಜೀವನದುದ್ದಕ್ಕೂ ಗಮಕ ಕಲೆಯನ್ನು ಪೋಷಿಸಿಕೊಂಡು ಬಂದರು. ಇವರು ಹೆಚ್ಚಿನ ಸಂಗೀತಗಾರರಲ್ಲದಿದ್ದರೂ ರಸಭಾವಗಳನ್ನು ಹೊರಹೊಮ್ಮಿಸಲು ಬೇಕಾದಷ್ಟು ವಿವಿಧರಾಗಗಳನ್ನು ಸಂದರ್ಭೋಚಿತವಾಗಿ ಅಳವಡಿಸಿ ವಾಚನ ಮಾಡಲು ಅಭ್ಯಾಸ ಮಾಡಿಕೊಂಡಿದ್ದರು. ಕವಿ ಹೃದಯ ಸಹೃದಯರಿಗೆ ಮನದಟ್ಟಾಗುವಂತೆ, ಅವರ ಮನಮಿಡಿದು ಆನಂದಬಾಷ್ಪ ತುಳುಕುವಂತೆ, ಮೈಪುಳಕಿತವಾಗುವಂತೆ ವಾಚಿಸುವ ಕಲೆ ಇವರಿಗೆ ಸಿದ್ಧಿಸಿತ್ತು. ಇವರ ವಾಚನ ಶೈಲಿಯನ್ನು ಟಿ.ಎಸ್. ವೆಂಕಣ್ಣಯ್ಯ ಬಿ.ಎಂ. ಶ್ರೀಕಂಠಯ್ಯ, ಮಾಸ್ತಿ ವೆಂಕಟೇಶಅಯ್ಯಂಗಾರ್, ಡಿವಿಜಿ ಮುಂತಾದ ಸಾಹಿತ್ಯ ವಿದ್ವಾಂಸರು ಬಲುವಾಗಿ ಮೆಚ್ಚಿಕೊಂಡಿದ್ದರು. ಕನ್ನಡ ಸಾಹಿತ್ಯ ಪರಿಷತ್ತಿನ ಸಂಪರ್ಕ ರಾಯರಿಗೆ ದೊರಕಿದ ಮೇಲೆ (ಸು. 1935) ಇವರ ವಾಚನಕ್ಕೆ ಆಖಿಲ ಕರ್ನಾಟಕ ಮಟ್ಟದ ಖ್ಯಾತಿ ದೊರೆಯಿತು. ಕೆಲಕಾಲ ಇವರು ಪರಷತ್ತಿನಲ್ಲಿ ಗಮಕ ಕಲೆಯ ಬೋಧಕರಾಗಿಯೂ ಕೆಲಸ ಮಾಡಿದರು. ಅಂದು ಬಿಂದೂರಾಯರ ಶಿಷ್ಯರಾಗಿದ್ದವರು ಅನೇಕರು ತರುವಾಯದ ದಿನಗಳಲ್ಲಿ ಉಚ್ಚ ಮಟ್ಟದ ಗಮಕಿಗಳಾಗಿ ಪ್ರಸಿದ್ಧರಾಗಿದ್ದಾರೆ. ಅವರುಗಳಲ್ಲಿ ಶಕುಂತಳಾಬಾಯಿ ಪಾಂಡುರಂಗರಾಯ, ದಿವಂಗತ ಎಂ.ಎನ್.ಚಂದ್ರ ಶೇಖರಯ್ಯ, ಎನ್. ಶ್ರೀನಿವಾಸರಾಯ, ಎಸ್. ನಾಗೇಶರಾಯ, ಎಂ. ಹರಿನಾರಾಯಣ, ಗವಾಯ್ ಗುರುರಾವ್ ದೇಶಪಾಂಡೆ ಮುಂತಾದವರನ್ನು ಹೆಸರಿಸಬಹುದು. 

ಬಿಂದೂರಾಯರಿಗೆ ಅನೇಕ ಪ್ರಶಸ್ತಿ ಗೌರವಗಳು ಲಭ್ಯವಾಗಿವೆ. 1950 ರಲ್ಲಿ ಮುಂಬಯಿಯಲ್ಲಿ ನಡೆದ 34ನೆಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಇವರು ಗಮಕ ಗೋಷ್ಠಿಯ ಅಧ್ಯಕ್ಷರಾಗಿದ್ದರು. 1967ರ ದಸರ ವಸ್ತುಪ್ರದರ್ಶನದಲ್ಲಿ ರಾಜ್ಯ ಸರ್ಕಾರ ಇವರಿಗೆ ಗಮಕ ಪ್ರಶಸ್ತಿ ನೀಡಿ ಗೌರವಿಸಿತು. 

ಗಂಧದ ಇಲಾಖೆ ಮತ್ತು ಕೃಷ್ಣರಾಜೇಂದ್ರ ಗಿರಣಿಯಲ್ಲಿ ಉದ್ಯೋಗಿಯಾಗಿದ್ದು ಮೈಸೂರಿನಲ್ಲಿ ನೆಲೆಸಿದ್ದ ರಾಯರು 12-3-1969ರಂದು ನಿಧನಹೊಂದಿದರು.
(ಜಿ.ಎಸ್.ಕೆ.ಇ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ